ರಾಹುಲ್ ದ್ರಾವಿಡ್
1973-. ಭಾರತ ಕ್ರಿಕೆಟ್ ತಂಡದ ಪ್ರಪಂಚ ಪ್ರಸಿದ್ಧ ಆಟಗಾರ. ರಾಹುಲ್ ದ ವಾಲ್ ದ್ರಾವಿಡ್ (ಗೋಡೆ) ಎಂದೇ ಪ್ರಸಿದ್ಧರು. ಇವರು 1973 ಜನವರಿ 11ರಂದು ಇಂದೂರಿನಲ್ಲಿ ಜನಿಸಿದರು. ಶಾಲಾ ದಿನಗಳಿಂದಲೇ ಕ್ರಿಕೆಟ್ ಆಸಕ್ತಿ ಬೆಳೆಸಿಕೊಂಡರು. ಇವರ ತಂದೆ ಹಾಗೂ ಚಿಕ್ಕಪ್ಪ ಕ್ರಿಕೆಟ್ ಪ್ರೇಮಿಗಳಾಗಿದ್ದುದು ಇವರ ಮೇಲೆ ಪ್ರಭಾವ ಬೀರಿತು. ಬೆಂಗಳೂರಿನ ಸೇಂಟ್ ಜೊಸೆಫ್ ಶಾಲೆಯ ಕ್ರಿಕೆಟ್ ತಂಡದಲ್ಲಿ ತಮ್ಮ ಪ್ರತಿಭೆ ತೋರಿದ ಇವರು 15, 17 ಹಾಗೂ 19 ವರ್ಷದೊಳಗಿನವರ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಗಮನ ಸೆಳೆದರು. ಕ್ರಿಕೆಟ್ ಆಟಗಾರರಾದ ಜಿ.ಆರ್.ವಿಶ್ವನಾಥ್, ಕೆ.ಕೆ. ತಾರಾಪೂರ್, ರೋಜರ್ ಬಿನ್ನಿ ಹಾಗೂ ಬ್ರಿಜೇಶ್ ಪಟೇಲ್ ಮೊದಲಾದವರು ಇವರಿಗೆ ಪ್ರೋತ್ಸಾಹ ನೀಡಿದರು.

1991ರಲ್ಲಿ ಮಹಾರಾಷ್ಟ್ರದ ವಿರುದ್ಧ ಮೊದಲ ರಣಜಿ ಪಂದ್ಯ ಆಡಿದರು. ಅನಂತರ ಪಶ್ಚಿಮ ಬಂಗಾಲ, ಗೋವ ಹಾಗೂ ಕೇರಳ ತಂಡಗಳ ವಿರುದ್ಧ ಗಮನಾರ್ಹ ಪ್ರದರ್ಶನ ನೀಡಿದರು. ಈ ವೇಳೆಗೆ ಸೇಂಟ್ ಜೊಸೆಫ್ ವಾಣಿಜ್ಯ ಕಾಲೇಜಿನಲ್ಲಿ ಪದವಿ ಅಧ್ಯಯನವನ್ನೂ ನಡೆಸಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.

ಭಾರತ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಪ್ರವೇಶ ಪಡೆದ ಇವರು ಲಾಡ್ರ್ಸ್‍ನಲ್ಲಿ ಇಂಗ್ಲೆಂಡ್ ವಿರುದ್ಧ ಎರಡನೆಯ ಟೆಸ್ಟ್‍ನಲ್ಲಿ (1996) ಮೊದಲ ಟೆಸ್ಟ್ ಪಂದ್ಯವನ್ನೂ ಸಿಂಗಪುರದಲ್ಲಿ ಶ್ರೀಲಂಕ ವಿರುದ್ಧ ಸಿಂಗರ್ ಕಪ್‍ಗಾಗಿ ನಡೆದ ಪಂದ್ಯದಲ್ಲಿ ಮೊದಲ ಏಕದಿನ ಪಂದ್ಯವನ್ನೂ (1995-96) ಆಡಿದರು. ತರುವಾಯ ಭಾರತ ತಂಡದ ಅನಿವಾರ್ಯ ಸದಸ್ಯರಾದರು. ಬಲಗೈ ಬ್ಯಾಟ್ಸ್‍ಮನ್ ಆದ ಇವರು ಬಲಗೈ ಆಫ್ ಸ್ಪಿನ್ ಬೌಲರ್ ಆಗಿಯೂ ಅತ್ಯುತ್ತಮ ವಿಕೆಟ್ ಕೀಪರ್ ಆಗಿಯೂ ಗಮನಸೆಳೆದಿದ್ದಾರೆ.

ಟೆಸ್ಟೊಂದರ ಪ್ರತೀ ಇನ್ನಿಂಗ್ಸ್‍ನಲ್ಲಿ ಸೆಂಚುರಿ ಬಾರಿಸಿದ ಮೂವರು ಭಾರತೀಯರಲ್ಲಿ (ವಿಜಯ್ ಹಜಾರೆ ಹಾಗೂ ಸುನಿಲ್ ಗವಾಸ್ಕರ್ ಉಳಿದ ಇಬ್ಬರು) ಇವರೂ ಒಬ್ಬರು. ನ್ಯೂಜಿಲೆಂಡ್ ವಿರುದ್ಧ 1999ರಲ್ಲಿ ಇವರು ಈ ಗುಂಪಿಗೆ ಸೇರಿದರು.

	ನಾಗ್‍ಪುರದ ವೈದ್ಯೆ ವಿಜೇತಾ ಪೆಂಡಾರ್ಕರ್‍ರನ್ನು ವಿವಾಹವಾದ (2003) ಇವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರಿಗೆ ಹಲವಾರು ಪುರಸ್ಕಾರಗಳು ಸಂದಿವೆ. ಪದ್ಮಶ್ರೀ (2004), ವೈಸ್ಡನ್ ಕ್ರಿಕೆಟರ್(2004), ಐ.ಸಿ.ಸಿ. ಪ್ರಶಸ್ತಿ(2004), ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಮೊದಲಾದುವು ಇವುಗಳಲ್ಲಿ ಪ್ರಮುಖವಾದುವು.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ